Sunday, June 12, 2011

bramhins

ಚೆನ್ನೈ, ಜೂನ್ 12: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಸೋಲಿನ ಬುತ್ತಿ ಕಟ್ಟಿಕೊಟ್ಟವರು ಯಾರು? ಚುನಾವಣೆಯಲ್ಲಿ ಹೀನಾಯ ಸೋಲುಂಡು ಮಾಜಿ ಸಿಎಂ ಪಟ್ಟಕ್ಕಿಳಿದ ಎಂ ಕರುಣಾನಿಧಿ ಅವರ ದೃಷ್ಟಿಯಲ್ಲಿ ಮೈತ್ರಿಕೂಟ ಸೋಲುಣ್ಣುವಂತೆ ಮಾಡಿದ್ದು ಬ್ರಾಹ್ಮಣರಂತೆ! ಹಾಗೆ ನೋಡಿದರೆ ಕರುಣಾನಿಧಿ ಸಾಹೇಬರು ಬ್ರಾಹ್ಮಣರನ್ನು ದೂಷಿಸುತ್ತಿರುವುದು ಇದೇ ಮೊದಲಲ್ಲ.

ಕಳೆದ ವಾರ ನಡೆದ ಪಕ್ಷದ ತುರ್ತು ಸಭೆಯಲ್ಲಿ ಹಿರಿಯಜ್ಜ ಕರುಣಾನಿಧಿ ಗರಂ ಆಗಿದ್ದರು. ಆ ನಂತರ, ಸುದ್ದಿಗೋಷ್ಠಿಯಲ್ಲೂ ನಿಗಿನಿಗಿ ಕೆಂಡದಂತಿದ್ದರು. ಪತ್ರಕರ್ತರೊಬ್ಬರು, ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ 2ಜಿ ಹಗರಣ ಕಾರಣವೇ ಎಂಬ ಪ್ರಶ್ನೆ ಎಸೆದರು.

ಪ್ರಶ್ನೆ ಕೇಳುತ್ತಲೇ ಮತ್ತಷ್ಟು ಕೆರಳಿದ ಡಿಎಂಕೆ ನಾಯಕ, ಪಕ್ಷಕ್ಕೆ ಸೋಲು ತಂದಿದ್ದು 2ಜಿ ಹಗರಣವಲ್ಲ, ಕೆಲವೊಂದು ಬ್ರಾಹ್ಮಣರ ಸಂಚಿನಿಂದಾಗಿ ನಾವು ಈ ಸ್ಥಿತಿ ತಲುಪಬೇಕಾಯಿತು ಎಂದು ಕೋಪದಿಂದ ಉತ್ತರ ನೀಡಿದರು.

ಈ ವೇಳೆ ದೆಹಲಿಯಲ್ಲಿ ಬಿಜೆಪಿ ಮತ್ತು ಡಿಎಂಕೆ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆಯಂತಲ್ಲ ಎಂಬ ಮತ್ತೂಂದು ಪ್ರಶ್ನೆ ಕರುಣಾನಿಧಿ ಅವರತ್ತ ತೂರಿಬಂತು. ಈ ಪ್ರಶ್ನೆಗೂ ರೇಗಿದ ಮಾಜಿ ಸಿಎಂ, ಹೀಗೇ ಬಿಟ್ಟರೆ ... ಬಾಬಾ ರಾಮದೇವ್‌ ಜತೆಗೂ ನಾನು ಮೈತ್ರಿ ಮಾತುಕತೆ ನಡೆಸುತ್ತೇನೆ ಎನ್ನುತ್ತೀರಿ ಎಂದು ಮರುಬಾಣ ಎಸೆದರು.

ಯುಪಿಎ ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂಬ ಮತ್ತೂಂದು ಪ್ರಶ್ನೆಗೆ, ರಸ್ತೆಯಲ್ಲಿ ಸುತ್ತಾಡಿಕೊಂಡಿರುವವರಿಗೆ ನನ್ನ ಸ್ವಾಭಿಮಾನದ ಬಗ್ಗೆ ಉತ್ತರ ನೀಡಬೇಕಾದ್ದಿಲ್ಲ, ನನ್ನ ಸ್ವಾಭಿಮಾನ ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ಮತ್ತೂಬ್ಬ ಪತ್ರಕರ್ತರು, 2ಜಿ ಪ್ರಕರಣದಲ್ಲಿ ಕಾಂಗ್ರೆಸ್‌ ನಿಮಗೆ ಸಹಾಯ ಮಾಡಿಲ್ಲ ಎಂಬ ವಿಷಾದವಿದೆಯೇ ಎಂದು ಪ್ರಶ್ನಿಸಿದರು. ಖಂಡಿತಾ ವಿಷಾದವಿಲ್ಲ, ಆದರೆ ವಿಷಾದ ಮೂಡಿಸಲು ನೀವು ಬಹಳ ಪ್ರಯತ್ನ ಪಡುತ್ತಿದ್ದೀರಿ ಎಂದು ಮತ್ತೆ ಪತ್ರಕರ್ತರ ಮೇಲೆ ಹರಿಹಾಯ್ದರು. ಹೀಗೆ ಇಡೀ ಸುದ್ದಿಗೋಷ್ಠಿಯನ್ನು ಪತ್ರಕರ್ತರ ಮೇಲೆ ಹರಿಹಾಯಲೇ ಕರುಣಾನಿಧಿ ಬಳಸಿಕೊಂಡರು

1 comment:

Phadke said...

ಈ ಮುದುಕ ಬ್ರಾಹ್ಮಣ ದ್ವೇಷಿ.